ಫೆನಿಲಾನ್
 	1651-1715. 17ನೆಯ ಶತಮಾನದ ಸಂಸ್ಕøತ ಪ್ರಪಂಚದಲ್ಲೂ ಮತೀಯ ಪ್ರಪಂಚದಲ್ಲೂ ಬಲು ಪ್ರಖ್ಯಾತ ಪುರುಷನಾಗಿದ್ದವ. ಫ್ರಾನ್ಷ್‍ವಾಡ ಸಾಲಿಗ್ನಾಕ್ ಡ ಲಮೋತ್ ಫೆನಿಲಾನ್ ಎಂಬುದು ಈತನ ಪೂರ್ತಿ ಹೆಸರು. ಕುಲೀನ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಈತ ಸೂಕ್ಷ್ಮಪ್ರಕೃತಿಯವನೂ ದುರ್ಬಲನೂ ಆಗಿದ್ದುದರಿಂದ ಹನ್ನೆರಡು ವರ್ಷದವರೆಗೆ ಮನೆಯಲ್ಲೇ ಶಿಕ್ಷಣ ಪಡೆದ. ಬೋಧಕ ಜ್ಞಾನಾಪೇಕ್ಷೆಯನ್ನೂ ಸಾಹಿತ್ಯಾಸಕ್ತಿಯನ್ನೂ ಶ್ರದ್ಧೆಯಿಂದ ಗಳಿಸಿಕೊಂಡ. ಕೊಂಚಕಾಲ ಕಾಲೇಜಿಗೆ ಸೇರಿದ. ಅಲ್ಲಿ ಇವನ ವಿಶೇಷ ಶಕ್ತಿಗಳು ಪ್ರಕಟಗೊಂಡುವು. 15ನೆಯ ವಯಸ್ಸಿನಲ್ಲೇ ಧರ್ಮೋಪದೇಶ ಮಾಡಬಲ್ಲವನಾದ. ತಂದೆ ತೀರಿಕೊಂಡ ಮೇಲೆ ಆಶ್ರಯವಿತ್ತ ತನ್ನ ಚಿಕ್ಕಪ್ಪನ ಇರಾದೆಯಂತೆ ಜೆಸೂಯಿಟ್ ಪ್ರಭಾವದಿಂದ ಹೊರ ಬಂದು ಟ್ರೂಸಾನ್ ಎಂಬ ನಿಷ್ಠ ವಿದ್ಯಾವಂತನ ಶಾಲೆಗೆ ಸೇರಿದ. ಉತ್ತಮ ವಿದ್ಯಾಭ್ಯಾಸ ಪಡೆದ. ಧರ್ಮ ಪ್ರಚಾರಕನಾಗಿ ಕೆನಡಾಕ್ಕೊ ಗ್ರೀಸಿಗೊ ಹೋಗಬೇಕೆಂಬ ಉತ್ಕಟಾಪೇಕ್ಷೆ ಇತ್ತಾದರೂ ದೇಹದ ದೌರ್ಬಲ್ಯ ಹಾಗೂ ಸಂಬಂಧಿಗಳ ಹಿತವಾಕ್ಯಕ್ಕೆ ತಲೆಬಾಗಿ ಊರಿನಲ್ಲೇ ಉಳಿದ. ಕ್ಯಾತೊಲಿಕ್ ಪಂಥಕ್ಕೆ ಮತಾಂತರಗೊಂಡಿದ್ದ ಹೆಂಗಸರ ಪುರೋಭಿವೃದ್ದಿಗಾಗಿ ಏರ್ಪಟ್ಟಿದ್ದ ಸಂಸ್ಥೆಯ ಮುಖ್ಯಸ್ಥನಾಗಿ 1675ರಿಂದ ಹತ್ತುವರ್ಷ ಸದ್ದಿಲ್ಲದ ಶ್ರದ್ದೆಯ ಸೇವೆ ಸಲ್ಲಿಸಿದ. ಬಾಲಕಿಯರ ವಿದ್ಯಾಭ್ಯಾಸ, ಪ್ರಕೃತಿ ಮತ್ತು ಕೃಪಾದಾನ, ಪುರೋಹಿತರ ಕೈಂಕರ್ಯ ಎಂಬ ಮೂರು ಉತ್ತಮ ಪ್ರಬಂಧಗಳನ್ನು ಬರೆದ. ಮೊದಲನೆಯದರ ಕೆಲವು ಹೇಳಿಕೆ ಈಗಲೂ ಅನುಮೋದನ ಯೋಗ್ಯವಾಗಿವೆ. 

	ದೊರೆ 14ನೆಯ ಲೂಯಿ 1685ರಲ್ಲಿ ಪ್ರಾಟೆಸ್ಟಂಟರನ್ನು ಹೊರಕ್ಕಟ್ಟುವ ದುರುದ್ದೇಶದಿಂದ ಅವರಿಗೆ ಕೊಟ್ಟಿದ್ದ ಸವಲತ್ತುಗಳನ್ನು ರದ್ದುಗೊಳಿಸಿದಾಗ ಕೆಲವು ಪ್ರದೇಶಗಳಲ್ಲಿ ಬಹಳ ಗಲಭೆ ಉಂಟಾಯಿತು. ಕ್ರುದ್ದರಾದವರನ್ನು ಸಮಾಧಾನಗೊಳಿಸುವುದಕ್ಕೆ ಏರ್ಪಟ್ಟ ಆಯೋಗದ ನಾಯಕತ್ವ ಇವನದಾಯಿತು. ತನ್ನ ಕೆಲಸವನ್ನು ಈತ ಬಲು ಚೆನ್ನಾಗಿ ನಿರ್ವಹಿಸಿ ರಾಜನ ಪ್ರೀತ್ಯಾದರಗಳಿಗೆ ಪಾತ್ರನಾದ ಪ್ರಧಾನ ಬಿಷಪ್ಪನ ಒಪ್ಪಿಗೆ ಸಿಗಲಿಲ್ಲವಾಗಿ ರಾಜನಿಂದ ಈತನಿಗೆ ದೊರಕಬೇಕಾದ ಹುದ್ದೆಗೆ ಕಲ್ಲುಬಿತ್ತು. 

	ದೊರೆಯ ಮೊಮ್ಮಗ ಬರ್ಗಂಡಿ ಡ್ಯೂಕಿಗೆ ಫೆನಿಲಾನ್ ಬೋಧಕನಾಗಿ 1689ರಿಂದ ಆರು ವರ್ಷ ಆ ಕೆಲಸವನ್ನು ಸಮರ್ಪಕವಾಗಿ ಮಾಡಿದ. ಬೋಧನೆಗಾಗಿ ತಾನು ಬರೆದಿಟ್ಟುಕೊಂಡ ಸಾಮಗ್ರಿಯಲ್ಲಿ ಮುಂದೊಮ್ಮೆ ಟೆಲೆಮಾಕ್ ಎಂಬ ಹೆಸರಿನಲ್ಲಿ ಪ್ರಕಟಿಸಿದ. ಅದು ಇವನ ಪತನಕ್ಕೆ ಒಂದು ಕಾರಣವಾಯಿತು. 

	ಮೋಲಿನೋಸ್ ಎಂಬ ಸ್ಪೇನಿನ ಪಾದ್ರಿಯಿಂದ ಸ್ಥಾಪಿತವಾದ ನಿಷ್ಕ್ರಿಯಾ ಪಂಥದ ಬಗ್ಗೆ ವಾದವಿವಾದಗಳು ಎದ್ದಾಗ ಅವನ್ನು ಇತ್ಯರ್ಥ ಮಾಡುವ ಕೆಲಸವನ್ನು ಫೆನಿಲಾನನಿಗೆ ಒಪ್ಪಿಸಲಾಯಿತು. ಅವನ ತೀರ್ಪು ಒಂದು ಕಡೆ ಪೋಪನನ್ನೂ ಇನ್ನೊಂದು ಕಡೆ ರಾಜನನ್ನೂ ಟೀಕಿಸುವಂತಿದ್ದುದರಿಂದ ಫೆನಿಲಾನನಿಗೆ ಎರಡೂ ಕಡೆ ಬಹಿಷ್ಕಾರ ಹಾಕಲಾಯಿತು. 

	ಅನಂತರ ಫೆನಿಲಾನ್ ಸಮಾಧಾನಚಿತ್ತದಿಂದ ತನ್ನ ಅಧಿಕಾರ ಕ್ಷೇತ್ರವಾದ ಕ್ಯಾಂಬ್ರೆಗೆ ಹೋಗಿ ಅಲ್ಲಿ ಬಿಷಪ್ ಪದವಿಯ ನಿಜ ಕರ್ತವ್ಯವನ್ನು ಈಡೇರಿಸುವುದರಲ್ಲಿ ನಿರತನಾದ. ಕ್ಯಾಂಬ್ರೆಯಲ್ಲಿ ಪ್ರಾಟೆಸ್ಟಂಟರು ಹಾಗೂ ಜಾನ್ಸೆನಿಸ್ಟರ ನಡುವೆ ಸೌಹಾರ್ದವನ್ನು ತಂದ. ಕಾಳಗದಲ್ಲಿ ಗಾಯಗೊಂಡವರಿಗೂ ರೋಗಗ್ರಸ್ತರಿಗೂ ತಾನೇ ಉಪಚಾರ ನಡೆಸಿದ. ಹಲವಾರು ವ್ಯಾಧಿಗೊಂಡ ಅಧಿಕಾರಿಗಳಿಗೆ ಅವನ ಅರಮನೆಯೇ ತಿಂಗಳುಗಟ್ಟಲೆ ಬಿಡಾರವಾಯಿತು. ಬಡಬಗ್ಗರಿಗೆ ಧಾರಾಳವಾಗಿ ಸಹಾಯಮಾಡಿದ. ಕುಶಲಪತ್ರ ಕಳಿಸುವುದಕ್ಕೆ ಅವನೆಂದೂ ಆಲಸ್ಯಗೊಳ್ಳಲಿಲ್ಲ. ಆಂಡ್ರೂರ್ಯಾಮ್ಸೆ ಎಂಬ ಸ್ಕಾಟ್ಲೆಂಡಿನವ ಹಾಲೆಂಡ್ ಜರ್ಮನಿಯಲ್ಲಿ ಸುತ್ತಾಡಿ ಕ್ಯಾಂಬ್ರೆಗೆ ಬಂದು ಫೆನಿಲಾನಿನ ಗುಣಶೀಲವನ್ನು ಕಾರ್ಯಾವಳಿಯನ್ನು ಮೆಚ್ಚಿ, ರೋಮನ್ ಕ್ಯಾತೊಲಿಕ್ ಆಗಿ ಅಲ್ಲೇ ನೆಲೆಸಿ ಫೆನಿಲಾನ್ ಆಳಿದ ಅನಂತರ ಅವನ ಜೀವನಚರಿತ್ರೆಯನ್ನು ಬರೆದ. 

	ಫೆನಿಲಾನಿನ ಬರಹದಲ್ಲಿ ನಯ ನಾಜೂಕಿದೆ, ಪರಿಶುದ್ಧತೆಯಿದೆ. ಮೆಲುಪಿದೆ. ಮನೋಹರತ್ವವಿದೆ. ಅವನ ಟೆಲೆಮಾಕ್ ಗದ್ಯದಲ್ಲಿದ್ದರೂ ಪದ್ಯಕಾವ್ಯವೆಂದೂ ಅಂಥ ಕೃತಿಗಳಲ್ಲಿ ಮೊಟ್ಟಮೊದಲನೆಯದೆಂದೂ ಪ್ರಸಿದ್ಧವಾಗಿದೆ. ನಾಟಕೀಯ ಅಚ್ಚರಿಕತೆಯಾಗಿ ವಿದ್ಯಾರ್ಥಿಯ ಉಲ್ಲಾಸಕ್ಕಾಗಿ ಅದನ್ನು ರಚಿಸಿದ್ದರೂ ಅದರ ತುಂಬ ನೀತಿಬೋಧೆಯೂ ರಾಜನೀತಿಯೂ ತುಂಬಿದೆ. ಕತೆ ಗ್ರೀಕ್ ವೀರ ಟೆಲೆವಾಕಸನನ್ನು ಕುರಿತದ್ದು; ಪುರಾತನವಾದ್ದು. ಅದನ್ನು ಸಾಕಷ್ಟು ಮಾರ್ಪಡಿಸಿಕೊಂಡು ತನ್ನ ಕಾಲದ ರಾಜಕೀಯ ಧಾರ್ಮಿಕ ಅನ್ಯಾಯಗಳನ್ನು ಬಯಲಿಗೆಳೆಯಲು ಕವಿ ಪ್ರಯತ್ನಿಸಿದ್ದಾನೆ.
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ